ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಶರವೂರು: ೧೦ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಶರವೂರು ದೇಗುಲದ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಭರ್ಜರಿ ಸಿದ್ಧತೆ

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಶರವೂರು. ಬ್ರಹ್ಮಕಲಶೋತ್ಸವಕ್ಕೆ ನಡೆಯುತ್ತಿದೆ ಭರ್ಜರಿ ತಯಾರಿ 

ಇತಿಹಾಸದಲ್ಲೇ ಮೊದಲ ಬಾರಿಗೆ ಸಮಗ್ರ ಜೀರ್ಣೋಧಾರಗೊಂಡ ದೇಗುಲ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ. ಈ ದೇವಸ್ಥಾನದ ಬಗ್ಗೆ ನಿಮಗೆಷ್ಟು ಗೊತ್ತು?  ಅಂದರೆ ಸುಮಾರು ಅಂದಾಜು 1100 ವರ್ಷಗಳಿಗಿಂತಲೂ ಹಳೆಯದಾದ ಮೂಲ ವಿಗ್ರಹವನ್ನು ಹಾಗೆಯೇ ಉಳಿಸಿಕೊಂಡು ಪೂರ್ತಿ ದೇವಸ್ಥಾನವನ್ನು ಶಿಲಾಮಯವಾಗಿ ಪೂರ್ತಿ ಹೊಸದಾಗಿ ಎರಡು ವರುಷಗಳ ಒಳಗೆ ಶ್ರೀ ದುರ್ಗಾಪರಮೇಶ್ವರಿಯ ಅನುನುಗ್ರಹದಿಂದ ಜೀರ್ಣೋದ್ಧಾರಗೊಂಡು ಇದೇ ಬರುವ ದಿನಾಂಕ ಮಾರ್ಚ್ 25ರಿಂದ ಏಪ್ರಿಲ್ 2 ರ ತನಕ ಬ್ರಹ್ಮ ಕಲಶೋತ್ಸವ ಬಹಳ ಅದ್ಧೂರಿಯಾಗಿ ನಡೆಯಲಿದೆ. ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಮಾರ್ಚ್ 30ಕ್ಕೆ ಪ್ರತಿಷ್ಠಾಪನೆ ಏಪ್ರಿಲ್ 2ಕ್ಕೆ ಬ್ರಹ್ಮ ಕಲಶ ನಡೆಯಲಿರುವುದು . ಪೂರ್ತಿ ಕಾರ್ಯಕ್ರಮಗಳು ಮಾರ್ಚ್ 25 ರಿಂದ ಪ್ರಾರಂಭವಾಗಲಿದೆ .ಲಕ್ಷಾಂತರ ಭಕ್ತರು ಪಾಲ್ಗೊಳ್ಳಲಿದ್ದಾರೆ . ನೀವು ಬನ್ನಿ ಶ್ರೀದೇವಿಯ ಅನುಗ್ರಹವನ್ನು ಪಡೆದುಕೊಳ್ಳಿ. 10 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ.

ದಿನಾಂಕವಾರು ಕಾರ್ಯಕ್ರಮಗಳ ಮಾಹಿತಿ ಈ ಕೆಳಗಿನಂತಿದೆ:

ದಿನಾಂಕ 25/03/2026ನೇ ಬುಧವಾರ ಮೊದಲ್ಗೊಂಡು ವೇದಮೂರ್ತಿ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ಸತ್ಕರ್ಮಗಳು ನಡೆಯಲಿವೆ.

ದಿನಾಂಕ 25/03/2026ನೇ ಬುಧವಾರ – ಬ್ರಹ್ಮ ಕಲಶೋತ್ಸವ ಪ್ರಾರಂಭ

ದಿನಾಂಕ 27/03/2026ನೇ ಶುಕ್ರವಾರ – ಗಂಗಾ ದೇವಿ ಪ್ರತಿಷ್ಠೆ. ಪೂರ್ವಾಹ್ನ ಗಂಟೆ 10:15ರ ಸಮಯ ನಡೆಯುವ ವೃಷಭ ಲಗ್ನ ಸುಮುಹೂರ್ತದಲ್ಲಿ

ದಿನಾಂಕ 30/03/2026ನೇ ಸೋಮವಾರ – ಶ್ರೀ ದುರ್ಗಾಪರಮೇಶ್ವರಿ ದೇವರ ಪ್ರತಿಷ್ಠೆ,ಶ್ರೀ ಗಣಪತಿ ದೇವರ ಪ್ರತಿಷ್ಠೆ,ಶ್ರೀ ಲಕ್ಷ್ಮೀ ನಾರಾಯಣ ದೇವರ ಪ್ರತಿಷ್ಠೆ. ಮಧ್ಯಾಹ್ನಗಂಟೆ 11:07 ರಿಂದ 11:08 ರ ಸಮಯ ನಡೆಯುವ ಮಿಥುನ ಲಗ್ನ ಸುಮುಹೂರ್ತದಲ್ಲಿ

ದಿನಾಂಕ 01/04/2026ನೇ ಬುಧವಾರ -ಧ್ವಜ ಪ್ರತಿಷ್ಠೆ,ಚಾಮುಂಡಿ ದೈವ ಪ್ರತಿಷ್ಠೆ, ಪುಷ್ಪರಥ ಸಮರ್ಪಣೆ ಪೂರ್ವಾಹ್ನ ಗಂಟೆ 9.30ರ ಸಮಯ ನಡೆಯುವ ವೃಷಭ ಲಗ್ನ ಸುಮುಹೂರ್ತದಲ್ಲಿ

ದಿನಾಂಕ 02/04/2026ನೇ ಗುರುವಾರ – ಶ್ರೀ ದೇವರಿಗೆ ಬ್ರಹ್ಮ ಕಲಶಾಭಿಷೇಕ.ಪೂರ್ವಾಹ್ನ ಗಂಟೆ 9:00ರಿಂದ 9.30ರ ಸಮಯ ನಡೆಯುವ ವೃಷಭ ಲಗ್ನ ಸುಮುಹೂರ್ತದಲ್ಲಿ

ದಿನಾಂಕ 03/04/2026ನೇ ಶುಕ್ರವಾರ – ನೂತನ ಬ್ರಹ್ಮರಥಕ್ಕೆ ಕಳಶ,ವರ್ಷಾವಧಿ ಉತ್ಸವ ಪ್ರಾರಂಭ ಧ್ವಜಾರೋಹಣ

ದಿನಾಂಕ 10/04/2026ನೇ ಶುಕ್ರವಾರ – ದರ್ಶನ ಬಲಿ

ದಿನಾಂಕ 11/04/2026ನೇ ಶನಿವಾರ – ಬ್ರಹ್ಮ ರಥೋತ್ಸವ

ದಿನಾಂಕ 12/04/2026ನೇ ಆದಿತ್ಯವಾರ – ಅವಭೃತ

ದಿನಾಂಕ 13/04/2026ನೇ ಸೋಮವಾರ – ಭದ್ರಕಾಳೀ ಅಮ್ಮನವರ ಪೂಜೆ ನಡೆಯಲಿದೆ.

ವಿಶೇಷತೆಗಳು

ಅನೇಕ ಭಕ್ತರು ಹಾಗೂ ವಿಶೇಷ ದನಿಗಳ ಕೊಡುಗೆ ಅಪಾರ ಮೂಲೆ ಮೂಲೆಯಿಂದ ಬಂದು ಭಕ್ತರಿಂದ ಹರಕೆ ಸಲ್ಲಿಕೆ. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪರೂಪ ದ 36.5 ಅಡಿ ಎತ್ತರವಿರುವ ಕಲ್ಲಿನ ಧ್ವಜಸ್ಥಂಭವನ್ನು ಕುಡುಪು ದೇವಸ್ಥಾನ ಬಿಟ್ಟರೆ ಇಲ್ಲಿ ಕಾಣಬಹುದುದಾಗಿದೆ. ಇದು ಕೂಡ ದನಿಗಳ ಸಹಕಾರದಿಂದ ಮಾಡಲಾಗಿದೆ.

ಬೋಳಿಯಾರ್ ಹರೀಶ್ ರವರ ಕೈಚಳಕದಿಂದ ಮಾಡಲ್ಪಟ್ಟ ಮರದ ಕೆತ್ತನೆಗಳು .ನಮಸ್ಕಾರ ಮಂಟಪದಲ್ಲಿ ವಿಶೇಷ ಕೆತ್ತನೆಗಳು ಪ್ರತಿಯೊಂದಕ್ಕೂ ದಾನಿಗಳ ಸಹಾಯ. ಚನ್ನಪಟ್ಟಣದಿಂದ ಕೂಡ ಬಂದ ದಾನಿಗಳು. ಅಂಗಣಕ್ಕೆ ಹಾಸಿರುವ ಕಲ್ಲಿನಿಂದ ಹಿಡಿದು ಪ್ರತಿಯೊಂದಕ್ಕೂ ದಾನಿಗಳ ಕೊಡುಗೆ ಅಪಾರ.

ಸುಂದರ ಪುಷ್ಪ ರಥ

ಸುಮಾರು 35 ಲಕ್ಷ ವೆಚ್ಚದ ಸುಂದರವಾದ ಪುಷ್ಪ ರಥ ದಾನಿಗಳಿಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಹಾಗೂ ಇಲ್ಲಿ ಶಿಲ್ಪಿಗಳ ಕೈಚಳಕದಲ್ಲಿ ಮೂಡಿದಂತಹ ಅನೇಕ ಸುಂದರ ಕೆತ್ತನೆಗಳನ್ನು ಕೂಡ ಕಂಡು ಕಣ್ಣು ತುಂಬಿಕೊಳ್ಳಬಹುದು.ಸುಂದರವಾದ ಮೆಟ್ಟಿಲುಗಳನ್ನೊಳಗೊಂಡು ನಿರ್ಮಾಣವಾಗಿದೆ ದೇವಸ್ಥಾನದ ರಾಜಗೋಪುರ. ಇದು ಕೂಡ ಅಂದಾಜು ಒಂದು ಕಾಲು ಕೋಟಿ ವೆಚ್ಚದಲ್ಲಿ ಒಂದು ಸಮುದಾಯದವರಿಂದ ಬಂದಂತಹ ಕೊಡುಗೆಯಾಗಿದೆ. ಹತ್ತು ಕೋಟಿ ವೆಚ್ಚದ ದೇವಸ್ಥಾನ ನಿರ್ಮಿಸುವಲ್ಲಿ ದಾನಿಗಳ ಕೊಡುಗೆ ಅಪಾರವಾದುದರಿಂದ ನಿರಾಯಾಸವಾಗಿ ಎಲ್ಲಾ ಕೆಲಸಗಳು ನಡೆಯುತ್ತಿವೆ. ಇಲ್ಲಿ ಮಹಿಳೆಯರ ಕೊಡುಗೆಯು ಕೂಡ ಅಪಾರವಾಗಿದೆ ಮತ್ತು ಅಲ್ಲಿನ ಸ್ಥಳೀಯರು ರಾತ್ರಿ ಹಗಲು ಎನ್ನದೆ ಶ್ರಮದಾನವನ್ನು ಮಾಡುತ್ತ ದುರ್ಗಾಪರಮೇಶ್ವರಿ ಅಮ್ಮನವರ ಕೃಪೆಗೆ ಪಾತ್ರಾಗಿದ್ದಾರೆ ಎನ್ನುತ್ತಾರೆ ಅಲ್ಲಿನ ಮುಖ್ಯಸ್ಥರು.ಇವೆಲ್ಲವೂ ದೇವರ ಕೃಪೆಯಿಂದ ಮಾತ್ರ ಸಾಧ್ಯ ಎನ್ನುವುದಕ್ಕೆ ನಮ್ಮ ಶರವೂರಿನ ದುರ್ಗಾಪರಮೇಶ್ವರಿ ಪುಣ್ಯಕ್ಷೇತ್ರವೇ ಸಾಕ್ಷಿಯಾಗುತ್ತಿದೆ.

ಷಡಾಧರ ಪ್ರತಿಷ್ಠೆ

ಅಂದರೆ ವಿಶೇಷವಾಗಿ ಸುಮಾರು 48 ಧಾತುಗಳನ್ನು ಮಾಡಿ ನವ ಧಾನ್ಯಗಳು,ಒಂಭತ್ತು ವಿಶೇಷವಾದ ಕಡೆಯ ಮಣ್ಣುಗಳು ನವರತ್ನಗಳು ಬೇರೆ ಬೇರೆ ವಿಧಾನಗಳಿಂದ ಷಡಾಧರ ಪ್ರತಿಷ್ಠೆಯು ನಡೆಯಲಿದೆ.

ಗರ್ಭಗುಡಿಯ ಅಂದಾಜು ವೆಚ್ಚ

ಗರ್ಭಗುಡಿಗೆ ಅಂದಾಜು ಒಂದು ಕಾಲು ಕೋಟಿಗಳಷ್ಟು ಖರ್ಚಾಗಿದೆ. ಇದು ಕೂಡ ನಮ್ಮ ಊರಿನ ಒಬ್ಬ ಧಾನಿಯ ಸಹಕಾರದಿಂದ ಪೂರ್ಣಗೊಂಡಿದೆ.ಮೇಲ್ಛಾವಣಿಯು ಸಂಪೂರ್ಣವಾಗಿ ತಾಮ್ರದಿಂದ ಮಾಡಲ್ಪಟ್ಟಿದೆ.

ಪಕ್ಕದಲ್ಲೇ ಗಂಗಾ ಪುಷ್ಕರಣಿ ಎಂಬ ಹೆಸರಿನ ಹಳೆಯದಾದ ಕೆರೆಯನ್ನು ಕಾಣಬಹುದು.

ಇತಿಹಾಸವನ್ನು ತಿಳಿದುಕೊಳ್ಳೋಣ

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ಶ್ರೀ ಕ್ಷೇತ್ರ ಶರವೂರು ಭಕ್ತರ ಹೃದಯದಲ್ಲಿ ಭಕ್ತಿಯ ಪುಳಕವನ್ನು ಹುಟ್ಟಿಸುವ ಪುಣ್ಯ ಕ್ಷೇತ್ರ ಶರವೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ

ಉಪ್ಪಿನಂಗಡಿ ಇಂದ ಪೂರ್ವಕ್ಕೆ ಎರಡೇ ಎರಡು ಕಿಲೋ ಮೀಟರುಗಳಷ್ಟು ಸಾಗಿದರೆ ಉಪ್ಪಿನಂಗಡಿ ಕುಕ್ಕೇಸುಬ್ರಹ್ಮಣ್ಯ ರಸ್ತೆ ಸಂಧಿಸುತ್ತದೆ.ತೆಂಕಣ ದಿಕ್ಕಿಗೆ ಸರಿಯುವ ಈ ಮಾರ್ಗದಲ್ಲಿ 16 ಕಿಲೋ ಮೀಟರುಗಳಷ್ಟು ದೂರ ಚಲಿಸಿದರೆ ಆಲಂಕಾರು ಗ್ರಾಮವನ್ನು ಸೇರುತ್ತೇವೆ.ಮತ್ತೆ ಅಲ್ಲಿಂದ ದಕ್ಷಿಣಕ್ಕೆ 2.5 ಕಿಲೋಮೀಟರ್ಗಳಷ್ಟು ಚಲಿಸಿದರೆ ತಲುಪಬಹುದು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ ಶರವೂರು.ಅಲ್ಲಿಂದ ಕುಮಾರಧಾರ ನದಿಯನ್ನು ಕೇವಲ 2 ಕಿಲೋಮೀಟರ್ಗಳಷ್ಟು ದೂರದಲ್ಲಿ ಕಾಣಬಹುದು

ನೇತ್ರಾವತಿ ಮತ್ತು ಕುಮಾರಧಾರ ನದಿಗಳ ನಡುವಿನ ಸುಮಾರು 25 ಕಿಲೋಮೀಟರ್ ಪ್ರದೇಶವನ್ನು ಸೇರಿದಂತಹ ಕ್ಷೇತ್ರ ಇದಾಗಿದೆ ಎಂದು ಶ್ರೀ ಮನ್ಮಧ್ವಾಚಾರ್ಯರು ಕರೆದಿದ್ದಾರೆ.ಶರವೂರು ಈ ಕ್ಷೇತ್ರದಲ್ಲೇ ಇರುವ ಪುಣ್ಯ ಸ್ಥಳವಾಗಿದೆ ಕುಮಾರಧಾರ ನದಿಯು ಇಲ್ಲಿಗೆ ಪಶ್ಚಿಮೊತ್ತರವಾಗಿ ಹರಿಯುತ್ತದೆ.

ಕುಮಾರಧಾರ ನದಿಯ ಉತ್ತರದಲ್ಲಿ ಈ ಗ್ರಾಮಗಳಾದ ಬಲ್ಯ, ಹಳೇನೆರೆಂಕಿ,ಪೆರಾಜೆ,ಕುಂತೂರು ಮತ್ತು ಆಲಂಕಾರಗಳನ್ನೊಳಗೊಂಡ ಸೀಮೆಗೆ ಶರವೂರು ಶ್ರೀ ದುರ್ಗಾಪರಮೇಶ್ವರಿಯು ಸೀಮೆ ದೇವಾಲಯ. ಶ್ರೀಸರಿದಂತರ ಕ್ಷೇತ್ರ ಮಹಾತ್ಮೆ ಪ್ರಕಾರ ಈ ಸ್ಥಳದಲ್ಲಿ ವಾಸಿಸುತ್ತಿದ್ದ ಪಾಂಡವರ ಗುರುಗಳು ಧೌಮ್ಯ ಮಹರ್ಷಿಗಳು ಇಲ್ಲಿಯ ಸರಸ್ಸಿನಲ್ಲಿ ಸ್ನಾನವನ್ನು ಮಾಡುತ್ತಿರುವಾಗ ನೀರಿನಲ್ಲಿ ದುರ್ಗಾಮಾತೆಯ ವಿಗ್ರಹ ಇರುವುದನ್ನು ಕಂಡರಂತೆ

ದುರ್ಗಾಮಾತೆಯು ಪ್ರತ್ಯಕ್ಷಗೊಂಡು ಮಹರ್ಷಿಗಳ ಮೂಲಕ ಪ್ರತಿಷ್ಠಾಪನೆಗೊಂಡಿರುವುದು. ಅವರ ಶಿಷ್ಯಂದಿರಾದ ಭೀಮಸೇನಾ ಮತ್ತು ಅರುಣ್ಯ ಮೂಲಕ ಪ್ರತಿಷ್ಠಾಪನೆಗೊಂಡಿರುವುದು ಅಲ್ಲಿಯೇ ಸರಸ್ಸಿನ ಮಧ್ಯೆ ಸ್ವಲ್ಪ ಜಾಗವನ್ನು ಮಾಡಿ ಗುಡಿಯನ್ನು ಕಟ್ಟಿ ದೇವರನ್ನು ಪ್ರತಿಷ್ಠಾಪನೆ ಮಾಡಿ ಪೂಜಿಸಿದರಂತೆ . ಪಾಂಡವರು ಇದ್ದಂತಹ ಕುರುಹುಗಳು ಇಂದಿಗೂ ಇದಾವೆ ಎನ್ನುವುದು ಜನರ ನಂಬಿಕೆ .ಇದಕ್ಕೆ ಸಾಕ್ಷಿಯಾಗಿ ಒಂದು ಕೆರೆಯು ಇದೆ ಎನ್ನುತ್ತಾರೆ. ಈ ಕೆರೆಗೆ ಕೆದ್ಧೋಟೆ ಕೆರೆ ಎಂದು ಕರೆಯುತ್ತಾರೆ ಯಕ್ಷ ಪ್ರಶ್ನೆಯು ಇಲ್ಲಿಯೇ ನಡೆದಿರುವುದು ಎನ್ನುವ ನಂಬಿಕೆಯು ಇದೆ . ಸುಮಾರು ಐದು ಸಾವಿರ ವರುಷಗಳ ಇತಿಹಾಸವು ಇದೆ ಎನ್ನುತ್ತಾರೆ. ಈ ಪ್ರತಿಷ್ಠಾಪನೆ ಕಾರ್ಯಕ್ಕೆ ಸರಸ್ಸಿನ ಗಂಗಾಮಾತೆಯ ಸಹಕಾರ ಪಡೆದುಕೊಂಡುದರಿಂದ ನೈರುತ್ಯ ಭಾಗದಲ್ಲಿ ಗುಡಿಯನ್ನು ಕಟ್ಟಿ ದುರ್ಗಾ ದೇವಿಯನ್ನು ಪ್ರತಿಷ್ಠಾಪಿಸಿದರಂತೆ . ಐತಿಹ್ಯಗಳೇನೇ ಇದ್ದರೂ ಗಂಗಾ ಮಾತೆ ಈಗಲೂ ಈ ಸ್ಥಳದ ದೇವತೆ. ದುರ್ಗೆಗೆ ನಡೆಯುವ ಎಲ್ಲ ರೀತಿಯ ಸೇವೆಗಳು ಗಂಗಾ ಮಾತೆಗೂ ನಡೆಯುತ್ತದೆ. ಮೂಲಸ್ಥಾನದ ದುರ್ಗೆ ಮತ್ತು ಉಪಸ್ಥಾನ ದೇವತೆಯಾದ ಗಂಗೆ ಇಬ್ಬರೂ ಈ ಕ್ಷೇತ್ರದಲ್ಲಿ ಸಮಾನ ಸ್ಕಂದರು.

ಈ ದೇವಾಲಯವು ರಮಣೀಯವಾದ ಪರಿಸರದಿಂದ ಕೂಡಿದೆ.ಮನಸ್ಸಿಗೆ ಮುದವನ್ನು ನೀಡುತ್ತದೆ.ವಿಶೇಷ ಏನೆಂದರೆ ಇದು ಯಾವಾಗಲೂ ಬತ್ತದ ನೀರಿನ ಬುಗ್ಗೆ ಇರುವ ಸ್ಥಳ.

ಇದರಿಂದಾಗಿಯೇ ಈ ಸ್ಥಳಕ್ಕೆ ಸರೋವರ ಪುರ ಎಂಬ ಹೆಸರುಗಳು ಹುಟ್ಟಿ ಈಗ ಶರವೂರು ಎಂಬ ಹೆಸರಿನಿಂದ ಕರೆಯಲಾಗುತ್ತಿದೆ.

ಈ ದೇವಾಲಯದ ವಾಸ್ತುವಿನಲ್ಲಿ ವಿಶೇಷತೆ ಅಂತ ಏನು ಇಲ್ಲ ದಶಕಗಳ ಹಿಂದೆ ಸಂಪೂರ್ಣವಾಗಿ ಜೀರ್ಣೋದ್ದಾರಗೊಂಡಿರುವುದರಿಂದ ಇದ್ದಂತಹ ಪ್ರಾಚೀನ ಕುರುಹುಗಳೆಲ್ಲ ಮಾಯವಾಗಿದೆ.ಹಾಗಾಗಿ ಈಗ ನೋಡುವವರಿಗೆ ಇದೊಂದು ಇಪ್ಪತ್ತನೇ ಶತಕದ ಕೊನೆಯ ದೇವಾಲಯ ಎಂದು ಹೇಳಲಾಗುತ್ತಿದೆ.

ದೇವಾಲಯದ ಗರ್ಭಗುಡಿಯನ್ನು ನೋಡಿದರೆ ನಮಗೆ ಪ್ರಾಚೀನತೆಯ ಕುರುಹು ದೊರೆಯುತ್ತದೆ.ಇಲ್ಲಿ ಪ್ರತಿಷ್ಠಿತಗೊಂಡು ಪೂಜೆಗೊಳ್ಳುತ್ತಿರುವ ದುರ್ಗೆಯ ಕೃಷ್ಣಶಿಲಾ ವಿಗ್ರಹವು ಅತೀ ಅಪೂರ್ವವಾದವು ನಿಂತ ಭಂಗಿಯಲ್ಲಿರುವ ಈ ದ್ವಿಬಾಹು ವಿಗ್ರಹದ ಬಲಗೈಯಲ್ಲಿ ಅಷ್ಟೇ ಎತ್ತರದ ತ್ರಿಶೂಲವನ್ನು ಕಾಣಬಹುದು.ಎಡಗೈ ನೀಳವಾಗಿ ಇಳಿಬಿಟ್ಟ ಪದ್ಮವನ್ನು ಹಿಡಿದಿದೆ.ದಷ್ಟಪುಷ್ಟವಾದ ದೇಹ,ಹಿತಮಿತವಾದ ವಸ್ತ್ರಾಭರಣ, ದೀರ್ಘ ಕುಂದಲಗಳು,ಭುಜದ ಮೇಲಿನಿಂದ ಹಿಂದಕ್ಕೆ ಇಳಿಬಿದ್ದ ಕೇಶರಾಶಿ ಇವುಗಳನ್ನುಳ್ಳ ವಿಗ್ರಹ ಸುಂದರವಾಗಿ ಪೀಠದ ಮೇಲೆ ನಿಂತಿದೆ.ವಿಶೇಷವಾಗಿ ಈ ವಿಗ್ರಹವನ್ನು ಪೀಠ ಸಮೇತ ಕೆತ್ತಲಾಗಿದೆ.ಹಿಂಬದಿಯಲ್ಲಿ ತೊಡೆಯ ಭಾಗದಿಂದ ಪಾದದವರೆಗೆ ವಿಗ್ರಹ ಬೇರ್ಪಡದೆ ಆಧಾರಶಿಲೆಯನ್ನು ಹೊಂದಿದೆ.ದೇವಿಯ ಶಿರದಲ್ಲಿ ಕಿರೀಟದ ಬದಲು ಶಿರಸ್ತ್ರಾಣ ಇದೆ. ಇದು ಬಹಳ ಅಪರೂಪದ ಶೈಲಿಯಲ್ಲಿದೆ. ಉಡುಪಿ ಜಿಲ್ಲೆಗಳಲ್ಲಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಾಣಸಿಗದಂತಹದ್ದು ಹಾಗಾಗಿ ಇದು ತುಂಬಾ ಅಪೂರ್ವವಾದದ್ದು ಎನ್ನಲಾಗಿದೆ.

ಶೈಲಿಯ ದೃಷ್ಟಿಯಿಂದ ಇದು ೧೧-೧೨ನೆಯ ಶತಮಾನಕ್ಕೆ ಸೇರುವಂತಹದು ಯಾಕೆಂದರೆ ದೀರ್ಘ ಕರ್ಣದ ರಚನೆಯು ೧೦-೧೧ ನೆಯ ಶತಮಾನದಲ್ಲಿ ಹೆಚ್ಚು ಪ್ರಚಲಿತವಾಗಿತ್ತು.ಈ ದೇವಿಯನ್ನು ದುರ್ಗಾಪರಮೇಶ್ವರಿ ಎಂದು ಕರೆದರೂ ಈಕೆ ಶೂಲಿನಿ. ದೇವಿ ಹಿಡಿದಿರುವ ತ್ರಿಶೂಲ ಇಲ್ಲಿ ಬಹಳ ಪ್ರಧಾನವಾಗಿದೆ.

ಸಪ್ತ ಮಾತೃಕೆಯರಲ್ಲಿ ಒಬ್ಬಳಾದ ಕುಮಾರಿಯ ರಚನೆ ಇಲ್ಲಿ ಶುದ್ಧವಾಗಿ ಮೂಡಿದೆ.ಹಾಗಾಗಿ ಶರವೂರಿನ ಈ ದೇವಿ ಕೌಮಾರಿ ಎನ್ನುವುದರಲ್ಲಿ ಸಂದೇಹವಿಲ್ಲ. ಸುಳ್ಯ ತಾಲೂಕು ಬೆಳ್ಳಾರೆ ಸಮೀಪವಿರುವ ಪೆರುವಾಜೆಯ ಶ್ರೀ ಜಲದುರ್ಗಾ, ಇದೇ ತಾಲೂಕಿನ ಎಡಮಂಗಲದ ಬಳಿಯ ಕೇರ್ಪಟ ಶ್ರೀ ವನದುರ್ಗಾ ಮತ್ತು ಶರವೂರಿನ ಶೂಲಿನಿ ದೇವಿಯರು ಅಕ್ಕತಂಗಿಯರೆಂಬ ನಂಬಿಕೆ ಜನರಲ್ಲಿದೆ.ಇಲ್ಲಿಯ ದೇವಾಲಯಗಳು ಸಮಕಾಲೀನವಾದವು .ಈ ಮೂರು ದೇವಾಲಯಗಳು ಸದಾ ನೀರಿನ ಆಶ್ರಯ ಹೊಂದಿದ್ದು ಸುಂದರ ಸಸ್ಯ ಶ್ಯಾಮಾಲೆಯಿಂದ ಆವೃತವಾದ ಸ್ಥಳದಲ್ಲಿವೆ. ಮೂರು ದೇವಾಲಯಗಳಲ್ಲಿ ಒಂದೇ ಕಾಲದಲ್ಲಿ ವರ್ಷಾವಧಿ ಜಾತ್ರೆ ನಡೆಯುತ್ತಿತ್ತು ಎಂದು ಹೇಳಲಾಗಿದೆ.

ದೇವಾಲಯದ ಒಳ ಭಾಗದಲ್ಲಿ ನೈರುತ್ಯ ಭಾಗದಲ್ಲಿರುವ ಸಣ್ಣ ಗುಡಿಯಲ್ಲಿ ಗಣಪತಿಯನ್ನು ಉಪ ದೇವರನ್ನಾಗಿ ಪ್ರತಿಷ್ಠಾಪಿಸಲಾಗಿದೆ. ಈಗ ಈ ಪ್ರಾಚೀನ ವಿಗ್ರಹದ ಬದಲಿಗೆ ಕೃಷ್ಣಶಿಲೆ ಇಂದ ತಯಾರಾದ ನೂತನ ವಿಗ್ರಹವನ್ನು ಈಗ ಪ್ರತಿಷ್ಠಾಪಿಸಲಾಗಿದೆ.

ದೇವಾಲಯದ ಮುಂಭಾಗದಲ್ಲಿ ಪಶ್ಚಿಮಾಭಿಮುಖವಾಗಿ ಭದ್ರಕಾಳಿಯ ಗುಡಿ ಇದೆ.ಭದ್ರಕಾಳಿಯ ಪ್ರಾಚೀನ ವಿಗ್ರಹ ದಾರುವಿನದ್ದಾಗಿದ್ದು ಚತುರ್ಭುಜಗಳಿಂದ ಕೂಡಿದ್ದಾಗಿದೆ.ಖಡ್ಗ, ಕಪಾಲ, ಡಮರು ಮತ್ತು ತ್ರಿಶೂಲಗಳನ್ನು ಈ ದೇವಿ ತನ್ನ ಹಸ್ತಗಳಲ್ಲಿ ಧರಿಸಿದ್ದಳು. ೧೯೮೧ರಲ್ಲಿ ಈ ದೇವಿಯ ಶಿಲಾಮಯ ವಿಗ್ರಹ ಮಾಡಿ ಪ್ರತಿಷ್ಠಾಪಿಸಲಾಯಿತು

ಕಲ್ಕುಡ, ಶಿರಾಡಿ, ರುದ್ರ,ಚಾಮುಂಡಿ, ಹುಲಿ ಭೂತ ಇವು ಈ ಸ್ಥಾನದ ದೈವಗಳು.ಹಿಂದೆ ದೇವಾಲಯದ ಎದುರು ಇರುವ ‘ಮಾರ್ಥಾರಿ ಬೆಟ್ಟ’ ದ ಮೇಲೆ ಈ ದೈವಗಳ ಮನೆ ಇತ್ತಂತೆ.ದೇವಾಲಯದ ರಥೋತ್ಸವದ ಸಂದರ್ಭದಲ್ಲಿ ಐದು ದಿನಗಳ ನೇಮ ಇಲ್ಲಿ ನಡೆಯುತ್ತಿತ್ತಂತೆ.ಈಗ ಅದರ ಕುರುಹು ಮಾತ್ರ ಇಲ್ಲಿ ಇದೆ. ಶಾಸ್ತ್ರೋಕ್ತವಾಗಿ ದೇವಾಲಯದಲ್ಲಿ ನಿತ್ಯ ಪೂಜೆ ನಡೆಯುತ್ತಿದೆ.ಇದಲ್ಲದೆ ಯುಗಾದಿ,ದೀಪಾವಳಿ, ನವರಾತ್ರಿ, ಕಾರ್ತಿಕ ಇತ್ಯಾದಿ ಪರ್ವ ಕಾಲಗಳ ಪೂಜೆ ಉತ್ಸವಗಳು ಇಲ್ಲಿ ವಿಜೃಂಭಣೆ ಇಂದ ನಡೆಯುತ್ತದೆ. ಮೀನ ಸಂಕ್ರಮಣದಿಂದ ಹನ್ನೊಂದು ದಿನಗಳ ವರ್ಷಾವಧಿ ಜಾತ್ರೆ ಇಲ್ಲಿ ನಡೆಯುತ್ತಿದೆ.ಒಂಭತ್ತನೆಯ ದಿನ ಮಹಾ ರಥೋತ್ಸವ ನಡೆಯುತ್ತದೆ. ಸೀಮೆಯ ಐದು ಗ್ರಾಮಗಳ ಜನ ಅಂದು ಅಲ್ಲಿ ಸೇರುತ್ತಾರೆ.ಹತ್ತನೆಯ ದಿನ ಅವಭೃತವು ಕುಮಾರಧಾರ ನದಿಯಲ್ಲಿ ಜರುಗುತ್ತದೆ.ಹನ್ನೊಂದನೆಯ ದಿನ ಭದ್ರಕಾಳಿ ಪೂಜೆ ಮತ್ತು ಸಂಪ್ರೋಕ್ಷಣೆಗಳು ನಡೆಯುತ್ತವೆ.

ಜಾತ್ರೆ ಸಮಯದಲ್ಲಿ ‘ಅಂಕ ಕಾದುವುದು’ ಎಂಬುದು ವಿಶೇಷವಿದೆ.

ಇದೊಂದು ಅಣುಕು ಯುದ್ಧ ಊರ ಗೌಡ ಮತ್ತು ಪರವೂರ ಗೌಡರಿಬ್ಬರ ನಡುವೆ ನಡೆಯುತ್ತದೆ.ಪೂರ್ವ ಸ್ಮೃತಿಯ ಘಟನೆಯೊಂದರ ತುಣುಕು ಇದು. ಈಗ ವಿನೋದದಲ್ಲಿ ಪರ್ಯವಸಾನವಾಗುತ್ತದೆ.

ಇಲ್ಲಿಯ ಇನ್ನೊಂದು ವಿಶೇಷ ವೆಂದರೆ ಸ್ಥಳದ ದೈವಗಳ ನಾಯಕತ್ವದಲ್ಲಿ ದೇವಿಯ ರಥೋತ್ಸವ ಜರುಗಬೇಕು.ಶ್ರೀ ದೇವಿಯ ರಥರೋಹಣ ಮತ್ತು ರಥಾವರೋಹಣ ಸಮಯಗಳಲ್ಲಿ ದೈವಗಳ ನುಡಿ ಆಗಲೇಬೇಕು.

AI ಕೆಲಸಕ್ಕೆ ಅರ್ಜಿ ಹಾಕಿದ ಭಾರತದ ಯುವತಿಗೆ ಶಾಕಿಂಗ್ ಅನುಭವ: ಸಂಪೂರ್ಣ ಮಾಹಿತಿ ಹೆಚ್ಚಿನ ಮಾಹಿತಿ ಇಲ್ಲಿ ಓದಿ :KPworld365