ರಾಜ್ಯದ ಹಲವೆಡೆ ವರುಣನ ಆರ್ಭಟ
ಬೇಸಿಗೆಯ ಬೇಗೆಗೆ ಬೆಂಗಳೂರು ಕೂಡ ಕೆಲವು ದಿನಗಳಿಂದ ತತ್ತರಿಸಿತ್ತು.ಈ ಬೇಸಿಗೆಯ ನಡುವೆ ರಾಜ್ಯದ ಹಲವು ಕಡೆಗಳಲ್ಲಿ ಬಿರುಗಾಳಿ, ಆಲಿಕಲ್ಲು, ಸಿಡಿಲು ಸಹಿತ ಅಕಾಲಿಕ ಮಳೆ ಸುರಿದಿದೆ.ಇದರಿಂದಾಗಿ ಹಲವಾರು ಜನರಿಗೆ ನಷ್ಟವು ಉಂಟಾಗಿದೆ.ಕೆಲವೆಡೆ ಮನೆಯ ಹೆಂಚುಗಳು ಹಾಗೂ ಮರಗಳು ನೆಲಕ್ಕೆ ಉರುಳಿವೆ.ಆಲಿಕಲ್ಲು ಸಹಿತ ಮಳೆಯಿಂದಾಗಿ ಮಾವು,ಅಡಿಕೆ ಇತರ ಬೆಳೆಗಳಿಗೂ ಹಾನಿಯಾಗಿದೆ.ಸಿಡಿಲಿಗೆ ಐದು ಜನರು ಬಲಿಯಾಗಿದ್ದಾರೆ.ಜನಜೀವನವನ್ನು ಅಸ್ತವ್ಯಸ್ಥವನ್ನಾಗಿಸಿದೆ.
ಮಾರ್ಚ್28 ಬೆಂಗಳೂರು:ಬೇಸಿಗೆಯ ಬಿಸಿಲಿನ ನಡುವೆ ವರುಣ ತನ್ನ ಆರ್ಭಟವನ್ನು ತೋರಿಸಿದ್ದಾನೆ.ಕೆಲವೆಡೆ ತೆಂಗಿನ ಮರಗಳು ಆಧಾರವನ್ನು ಕಳೆದುಕೊಂಡು ನೆಲಕ್ಕೆ ಉರುಳಿವೆ.ಬಳ್ಳಾರಿ,ರಾಯಚೂರು,ಕಲಬುರಗಿ ಮಾತ್ರವಲ್ಲದೆ ರಾಜ್ಯದ ಎಲ್ಲಾ ಕಡೆಯಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿತ್ತು.ಈ ಬಿಸಿಲಿನ ಮಧ್ಯದಲ್ಲಿ ವರುಣನ ಆಗಮನ ಸಂತಸ ಮೂಡಿಸುವ ಬದಲು ಜನರಲ್ಲಿ ಬೇಸರವನ್ನುಂಟುಮಾಡಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ಕೂಡ ವರುಣನ ಆರ್ಭಟ ಜೋರಾಗಿತ್ತು.
ಮೂಡಿಗೆರೆಯಲ್ಲಿ ಗಾಳಿಗೆ ಹಾರಿ ಹೋದ ಶಾಲೆಯ ಹಂಚು
ಇನ್ನು ಕಾಫಿ ನಾಡಿನಲ್ಲೂ ಹವಾಮಾನದಲ್ಲಿ ಹವಾಮಾನದಲ್ಲಿ ಬದಲಾವಣೆಯಾಗಿದ್ದು ಬಿರುಗಾಳಿ ಸಹಿತ ಮಳೆಯು ಸುರಿಯುತ್ತಿದೆ. ನಗರ ಸೇರಿದಂತೆ ಜಿಲ್ಲೆಯ ಹಲವು ಕಡೆ ಮಳೆಯಿಂದಾಗಿ ಕಾಫಿ ತೋಟಗಳಿಗೂ ಇದರ ಪರಿಣಾಮ ಬೀರಿದೆ.ಬಾರಿ ಮಳೆಗೆ ರಸ್ತೆಗಳು ನದಿಯಂತಾಗಿದ್ದು ಚರಂಡಿಗಳು ತುಂಬಿಕೊಂಡಿವೆ. ಇನ್ನು ವಾಹನ ಸಂಚಾರಿಗಳು ಕೂಡ ಪರದಾಡುವಂತೆ ಆಗಿದೆ. ಮಾರುಕಟ್ಟೆಗೆಂದು ಬಂದ ಸಾರ್ವಜನಿಕರು ಮಳೆಯಿಂದಾಗಿ ರಸ್ತೆಗಳು ನೀರಿನಿಂದ ಆವೃತಗೊಂಡಿರುವುದು ನೋಡಿ ಕಂಗಾಲಾಗಿದ್ದಾರೆ. ಕೆಲವು ಕಡೆಗಳಲ್ಲಿ ಮರಗಳು ಉರುಳುವ ಭಯದ ವಾತಾವರಣ ಸೃಷ್ಟಿಯಾಗಿತ್ತು.ಮೂಡಿಗೆರೆಯಲ್ಲಿ ಬಿರುಗಾಳಿ ಸಹಿತ ಜೋರು ಮಳೆಯಾಗಿದ್ದರಿಂದ ಮೂಡಿಗೆರೆಯ ಬಸ್ ನಿಲ್ದಾಣದ ಬಳಿ ಇರುವ ಸರಕಾರಿ ಪ್ರೌಢ ಶಾಲೆಯ ಹೆಂಚುಗಳು ಹಾರಿ ಪುಡಿ ಪುಡಿಯಾಗಿವೆ. ಈ ದೃಶ್ಯವನ್ನು ಮೊಬೈಲ್ ಕ್ಯಾಮೆರಾಗಳಲ್ಲಿ ಕೆಲವರು ಸೆರೆಹಿಡಿದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಹಾಗೇ ಮೂಡಿಗೆರೆ ತಾಲೂಕಿನ ಬಿದರಹಳ್ಳಿಯಲ್ಲಿ ಕೂಡ ಕ್ಯಾಂಟೀನ್ ನ ಮೇಲ್ಛಾವಣಿಯು ಹಾರಿ ಹೋಗಿದೆ.ತೆಂಗಿನ ಮರಗಳು ರಸ್ತೆಗೆ ಉರುಳಿದೆ. ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥವಾಗಿದೆ.
ಕಾರಿನ ಮೇಲೆ ಬಿದ್ದ ಮರ – ದಂಪತಿ ಅಚ್ಚರಿಯಾಗಿ ಪಾರಾದರು!
ಈ ಘಟನೆ ನಡೆದಿದ್ದು ಕೂಡ ಮೂಡಿಗೆರೆಯಲ್ಲಿ ಅಲ್ಲಿನ ಪರಿಮಲಮ್ಮ ಎಂಬ ದೇಗುಲದ ಬಳಿ ರಸ್ತೆಯಲ್ಲಿ ಚಲಿಸುತ್ತಿದ್ದಂತಹ ಕಾರಿನ ಮೇಲೆ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದಿದೆ.ಕಾರಿನಲ್ಲಿ ಚಲಿಸುತ್ತಿದ್ದಂತಹ ದಂಪತಿ ಅದೃಷ್ಟವಶಾತ್ ಬಚಾವ್ ಆಗಿದ್ದಾರೆ.ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೇಟಿ ನೀಡಿ ಮರವನ್ನು ತೆರವುಗೊಳಿಸಿದ್ದಾರೆ.
ಹಾಸನದಲ್ಲಿ ಸಿಡಿಲಿನ ದಾಳಿ: ಐವರು ಅಸ್ವತ್ರೆಗೆ ದಾಖಲು
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲೂ ತನ್ನ ಆರ್ಭಟವನ್ನು ತೋರಿದ್ದಾನೆ ವರುಣ. ದೀನಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ಐದು ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರು ಕಾಫಿ ತೋಟದಲ್ಲಿ ಕೆಲಸವನ್ನು ಮಾಡುತ್ತಿದ್ದಾಗ ಸಿಡಿಲು ಬಡಿದಿದ್ದು ಗಾಯಗೊಂಡ ದುರ್ಧೈವಿಗಳು ರೂಪಾ, ಲಕ್ಷ್ಮೀ,ಸುಮಿತ್ರಾ,ಜಯಮ್ಮ ಸೇರಿದಂತೆ ಇವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಲಿಕಲ್ಲು ಮಳೆ ಅಬ್ಬರ – ಮಾವು ಬೆಳೆಗಾರರು ಸಂಕಷ್ಟದಲ್ಲಿ!
ಧಾರವಾಡದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ.ಇದರಿಂದಾಗಿ ಮಾವು ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವಂತೆ ಆಗಿದೆ.ಸಾವಿರಾರು ಎಕರೆ ಪ್ರದೇಶಗಳಲ್ಲಿ ‘ಅಲ್ಫಾನ್ಸೋ’ ಮಾವು ಬೆಳೆಯನ್ನು ಬೆಳೆದಿದ್ದರು ಈ ಆಲಿಕಲ್ಲು ಮಳೆಯಿಂದಾಗಿ ಮಾವು ಬೆಳೆ ಸಂಪೂರ್ಣ ನಾಶವಾಗಿದ್ದು,ಕಾಯಿಗಳೆಲ್ಲ ನೆಲಕ್ಕೆ ಉರುಳಿ ಬಿದ್ದಿವೆ. ರೈತರು ಹಾಕಿದ ಬಂಡವಾಳವು ಕೂಡ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ,ರೈತರು ಕಂಗಾಲಾಗಿದ್ದಾರೆ. ಮಾವಿನ ಮರ ಹೂ ಬಿಡುವ ಸಂಧರ್ಭದಲ್ಲಿ ರೈತರು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಔಷಧವನ್ನು ಸಿಂಪಡಿಸಿ ಉತ್ತಮ ಇಳುವರಿ ಕೊಡುವಂತೆ ಮಾವಿನ ಕಾಯಿಗಳನ್ನು ಕಾಪಾಡಿಕೊಂಡಿದ್ದರು. ಇದರ ಬಗ್ಗೆ ಸರ್ಕಾರ ಎಚ್ಚೆತ್ತುಕೊಂಡು ಕೂಡಲೇ ಸಮೀಕ್ಷೆಯನ್ನು ನಡೆಸಬೇಕು ಮತ್ತು ಶೀಘ್ರ ಪರಿಹಾರವನ್ನು ನೀಡಬೇಕೆಂದು ಮಾವು ಬೆಳೆಗಾರರು ಆಗ್ರಹ ಮಾಡಿದ್ದಾರೆ.
ಧಾರವಾಡದಲ್ಲಿ ಕಳೆದ ಹತ್ತು ದಿನಗಳಿಂದಲೇ ಮಳೆಯು ಸುರಿಯುತ್ತಿದೆ. ಬೇಸಿಗೆಯ ಆರಂಭದಲ್ಲೇ ವರುಣ ಆಗಮಿಸಿದ್ದಾನೆ.ಈ ಆಲಿಕಲ್ಲು ಮಳೆಯಿಂದಾಗಿ ಅನೇಕ ರೈತರು ಬೀದಿಗೆ ಬರುವಂತೆ ಆಗಿದೆ.ಮರದಲ್ಲಿ ಆಗ ತಾನೇ ಹಚ್ಚ ಹಸಿರಾಗಿ ಆಕರ್ಷಣೆಯನ್ನು ಬೀರಿದ್ದ ಮಾವಿನ ಕಾಯಿಗಳು ನೆಲಕ್ಕೆ ಉರುಳುವುದು ನೋಡಲು ತುಂಬ ಕಷ್ಟಕರವಾಗುತ್ತದೆ.
ಧಾರವಾಡ ಜಿಲ್ಲೆಯ ಕಲಘಟಗಿ,ಹುಬ್ಬಳ್ಳಿ,ಮತ್ತು ಧಾರವಾಡ ಅತೀ ಹೆಚ್ಚು ಮಾವುಗಳನ್ನು ಬೆಳೆಯುವ ಪ್ರದೇಶಗಳಾಗಿವೆ. ಇದರಲ್ಲೂ ‘ಆಲ್ಪಾನ್ಸೋ’ ಮಾವಿಗೆ ಮಾರುಕಟ್ಟೆಯಲ್ಲಿ ಅತ್ಯಂತ ಬೇಡಿಕೆಯು ಇದೆ.ಇನ್ನೂ ಹೋದ ವರುಷದಲ್ಲಿ ಕೂಡ ಫಸಲು ಬಾರದೆ ಕಂಗಾಲಾಗಿದ್ದ ರೈತರು,ಈ ಬಾರಿಯ ಫಸಲು ನೋಡಿ ನಿರಾತಂಕವಾಗಿ ದಿನ ಕಳೆಯುತ್ತಿದ್ದ ಸಮಯದಲ್ಲಿ ಆಗಮಿಸಿದ ಆಲಿಕಲ್ಲು ಸಹಿತ ವರುಣನ ಆರ್ಭಟಕ್ಕೆ ರೈತರ ಆಸೆಗಳನ್ನೆಲ್ಲ ನಿರಾಶೆ ಮಾಡಿ ನೆಮ್ಮದಿಗೆ ಕಲ್ಲು ಹಾಕಿದಂತಾಗಿದೆ. ಕೆಲವೆಡೆ ಆಲಿಕಲ್ಲಿನ ರಭಸಕ್ಕೆ ಮಾವಿನಕಾಯಿಗಳು ಎಲೆಗಳ ಸಹಿತ ಉದುರುವಂತಾಗಿದೆ.
ಒಟ್ಟಿನಲ್ಲಿ ಬೇಸಿಗೆಗೆ ಬೆಂದು ಹೋಗಿದ್ದ ಜನರು ಅಯ್ಯೋ ಈ ಮಳೆ ಯಾವಾಗದರೂ ಬರುತ್ತೋ ಎಂದೆನಿಸಿದೆ ಅನ್ನುವ ಜನರಿಗೆ ತಂಪನ್ನು ಎರೆದರೆ. ಪಾಪ ಕೃಷಿಯನ್ನೇ ನಂಬಿದ ರೈತನ ಹೊಟ್ಟೆಗೆ ಬೆಂಕಿಯನ್ನು ಇಟ್ಟಂತೆ ಆಗಿದೆ ಎಂದು ರೈತರು ಕಣ್ಣೀರು ಹಾಕುವಂತೆ ಆಗಿದೆ.
ಇದನ್ನು ಓದಿ:AC ಬೇಡ ಫ್ಯಾನ್ ನಲ್ಲೇ ತಂಪು ಗಾಳಿ ಪಡೆಯಲು ಈ ಸ್ಮಾರ್ಟ್ ಟ್ರಿಕ್ಸ್ ಯೂಸ್ ಮಾಡಿ
ಅಕಾಲಿಕ ಮಳೆಯಿಂದಾಗಿ ಎದುರಿಸಬೇಕಾದ ಪರಿಸ್ಥಿತಿಗಳು
ಈ ಅಕಾಲಿಕ ಮಳೆಯಿಂದಾಗಿ ಕೇವಲ ಕೃಷಿ ಕ್ಷೇತ್ರಕ್ಕೆ ಮಾತ್ರವಲ್ಲ, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲೂ ವ್ಯಾಪಕ ಹಾನಿಯನ್ನು ಉಂಟು ಮಾಡಿದೆ. ಅನೇಕ ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಜನರು ಗಂಟೆಗಟ್ಟಲೆ ಕತ್ತಲೆಯಲ್ಲಿ ಕಳೆಯುವಂತಾಗಿದೆ.ಮಳೆಗಾಲ ಇನ್ನೂ ಆರಂಭವಾಗಿಲ್ಲವಾದರೂ ಈ ರೀತಿಯ ಬಿರುಗಾಳಿ ಹಾಗೂ ಸಿಡಿಲು ಮಳೆ ಜನರಲ್ಲಿ ಆತಂಕವನ್ನು ಹೆಚ್ಚಿಸುವಂತೆ ಮಾಡಿದೆ. ಹವಾಮಾನದಲ್ಲಿ ಉಂಟಾಗುತ್ತಿರುವ ಏರುಪೇರಿಗೆ ಹವಾಮಾನ ಬದಲಾವಣೆಯೇ ಕಾರಣ ಎಂದು ತಜ್ಞರು ಅಭಿಪ್ರಾಯವನ್ನು ಪಟ್ಟಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ರಾಜ್ಯದಲ್ಲಿ ಅಕಾಲಿಕ ಮಳೆ ಸಾಮಾನ್ಯವಾಗಿ ಬರುತ್ತಿದ್ದು, ರೈತರು ಯಾವ ಕಾಲದಲ್ಲಿ ಯಾವ ಬೆಳೆಗಳನ್ನು ಬೆಳೆಸಬೇಕು ಎಂಬುದರ ಬಗ್ಗೆ ಗೊಂದಲಕ್ಕೆ ಸಿಲುಕಿದ್ದಾರೆ. ಇದರಿಂದ ಕೃಷಿಯ ಯೋಜನೆ ಮಾಡಲು ಕಷ್ಟವಾಗುತ್ತಿದೆ. ವಿಶೇಷವಾಗಿ ಮಾವು,ಅಡಿಕೆ, ಕಾಫಿ ಬೆಳೆಗಾರರು ಇಂತಹ ಅನಿರೀಕ್ಷಿತ ಮಳೆಯಿಂದಾಗಿ ಭಾರೀ ನಷ್ಟ ಅನುಭವಿಸುತ್ತಿದ್ದಾರೆ. ಕಾಫಿ ತೋಟಗಳಲ್ಲಿ ಹೂ ಬೀಳುವ ಸಮಯದಲ್ಲಿ ಮಳೆ ಬಂದರೆ ಉತ್ಪಾದನೆ ಕುಸಿಯುವ ಸಾಧ್ಯತೆ ಹೆಚ್ಚು ಎಂದು ಕೃಷಿ ತಜ್ಞರು ಎಚ್ಚರಿಕೆಯನ್ನು ನೀಡಿದ್ದಾರೆ.
ಇದಲ್ಲದೆ ಗಾಳಿ ಮತ್ತು ಮಳೆಯ ಪರಿಣಾಮವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳ ಮೇಲ್ಛಾವಣಿಗಳು ಹಾರಿ ಹೋಗುವಂತದ್ದು,ಮರಗಳು ಉರುಳಿ ರಸ್ತೆ ತಡೆ ಉಂಟಾಗುವುದು, ಸಾಮನ್ಯ ದೃಶ್ಯಗಳಾಗಿವೆ. ಶಾಲೆಗಳು, ಅಂಗಡಿಗಳು, ಸರ್ಕಾರಿ ಕಟ್ಟಡಗಳಿಗೂ ಹಾನಿಯಾಗುತ್ತಿದೆ. ಇದರಿಂದ ಜನರ ದಿನ ನಿತ್ಯದ ಜೀವನಕ್ಕೆ ತೊಂದರೆ ಉಂಟಾಗುತ್ತಿದೆ.ವಿಶೇಷವಾಗಿ ಮಕ್ಕಳಿಗೆ ಶಾಲೆಗೆ ಹೋಗಲು ಸಮಸ್ಯೆ ಆಗುತ್ತದೆ.
ನಗರಗಳ ಪರಿಸ್ಥಿತಿ ಏನು ಭಿನ್ನವಾಗಿಲ್ಲ. ಬೆಂಗಳೂರಿನ ಮಹಾ ನಗರಗಳಲ್ಲಿ ಸ್ವಲ್ಪ ಮಳೆಯಾದರೂ ರಸ್ತೆಗಳು ನೀರಿನಿಂದ ತುಂಬಿಕೊಳ್ಳುತ್ತವೆ. ಈ ಬಾರಿ ಬಿದ್ದ ಮಳೆಯು ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ಟ್ರಾಫಿಕ್ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ. ಮಳೆ ನೀರು ಸರಿಯಾಗಿ ಹರಿದು ಹೋಗದ ಕಾರಣ ರಸ್ತೆಗಳು ಕೆರೆಗಳಂತಾಗಿವೆ.ಇದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.
ಈ ಸಂದರ್ಭದಲ್ಲಿ ಸರಕಾರ ಮತ್ತು ಸ್ಥಳೀಯ ಆಡಳಿತ ತಕ್ಷಣ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ.ಹಾನಿಗೊಳಗಾದ ರೈತರಿಗೆ ತುರ್ತು ಪರಿಹಾರವನ್ನು ನೀಡಬೇಕು, ಮನೆ ಕಳೆದುಕೊಂಡವರಿಗೆ ತಾತ್ಕಾಲಿಕ ಆಶ್ರಯವನ್ನು ಕಲ್ಪಿಸಬೇಕು. ಜೊತೆಗೆ ಹಾನಿಯ ಸಮೀಕ್ಷೆಯನ್ನು ಶೀಘ್ರವೇ ಪೂರ್ಣಗೊಳಿಸಿ ನಷ್ಟದ ಆಧಾರದ ಮೇಲೆ ಪರಿಹಾರವನ್ನು ವಿತರಿಸಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ.
ಹವಾಮಾನ ಇಲಾಖೆ ಇನ್ನೂ ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆಯಾಗುವ ಸಾಧ್ಯತೆ ಇರುವುದಾಗಿ ಮುನ್ಸೂಚನೆ ನೀಡಿರುವ ಹಿನ್ನಲೆಯಲ್ಲಿ ಜನರು ಎಚ್ಚರಿಕೆಯಿಂದ ಇರಬೇಕು.ಅಗತ್ಯವಿಲ್ಲದ ಹೊರಗಿನ ಪ್ರಯಾಣವನ್ನು ತಪ್ಪಿಸುವುದು, ಮಳೆ ಹಾಗೂ ಗುಡುಗು ಸಿಡಿಲಿನ ಸಮಯದಲ್ಲಿ ಸುರಕ್ಷಿತ ಸ್ಥಳಗಳಲ್ಲಿ ಉಳಿಯುವುದು ಮುಖ್ಯ.ರೈತರು ಕೂಡ ತಮ್ಮ ಬೆಳೆಗಳನ್ನು ಸಾಧ್ಯವಾದ ಮಟ್ಟಿಗೆ ರಕ್ಷಿಸುವ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.ಇಂತಹ ಪ್ರಕೃತಿ ವೈಪರೀತ್ಯಗಳನ್ನು ಎದುರಿಸಲು ದೀರ್ಘಕಾಲಿಕ ಯೋಜನೆ ಅಗತ್ಯವಾಗಿದ್ದು, ಸರ್ಕಾರ ಹಾಗೂ ಸಾರ್ವಜನಿಕರು ಒಟ್ಟಾಗಿ ಕೆಲಸ ಮಾಡಬೇಕಾಗಿದೆ.
ಇದನ್ನು ಓದಿ:48ನೇ ವರ್ಷದ ಉಬರ್ ಕಂಬಳೋತ್ಸವ: ಮಾರ್ಚ್ 28ರಂದು ನಡೆಸಲು ನಿರ್ಧಾರ
- Kadaba govt PU college success story: ಸೀಮಿತ ಸೌಲಭ್ಯಗಳ ನಡುವೆಯೂ ಕಡಬದ ಸರ್ಕಾರಿ ಪಿಯು ಕಾಲೇಜಿನ ಐತಿಹಾಸಿಕ ಸಾಧನೆ ಪೂರ್ತಿ ಮಾಹಿತಿ - April 10, 2026
- ಕರ್ನಾಟಕ 2ನೇ ಪಿಯುಸಿ ಫಲಿತಾಂಶ 2026:ಇಂದು ಮಧ್ಯಾಹ್ನ 3 ಗಂಟೆಗೆ ಫಲಿತಾಂಶ ಪ್ರಕಟ – ಕಡಿಮೆ ಅಂಕ ಅಥವಾ ಫೇಲ್ ಆದರೆ ಏನು ಮಾಡಬೇಕು, digilockernallu ಫಲಿತಾಂಶ ನೋಡಲು ಅವಕಾಶ, ಪರಿಶೀಲಿಸುವ ವಿಧಾನ, ಅಧಿಕೃತ ವೆಬ್ಸೈಟ್ಗಳು, ಸಂಪೂರ್ಣ ಮಾಹಿತಿ - April 9, 2026
- Breaking IBreaking Iran Conflict: ಸಾವಿನ ಸಂಖ್ಯೆ 34, ಹೋರ್ಮುಜ್ ಮಾರ್ಗದಿಂದ ತೈಲ ಬೆಲೆ ಏರಿಕೆ - April 7, 2026