Cancer Drug Crisis
ಭಾರತದಲ್ಲಿ ಕ್ಯಾನ್ಸರ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದರ ಚಿಕಿತ್ಸೆಯಲ್ಲಿ ಉತ್ತಮ ಬದಲಾವಣೆ ತರಲು ಕೆಲವೊಂದು ಮುಖ್ಯ ಔಷಧಿಗಳಿಗೆ ಮಾತ್ರ ಸಾಧ್ಯ. ಈ ಔಷಧಿಗಳಲ್ಲಿ Keytruda ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಇದು ಒಂದು ಇಮ್ಯುನೋಥೆರಪಿ ಔಷಧಿ, ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕ್ಯಾನ್ಸರ್ ರೋಗದ ವಿರುದ್ಧ ಹೋರಾಡುವಂತೆ ತರಬೇತಿ ನೀಡುತ್ತದೆ. ಪ್ರಪಂಚದ ಅನೇಕ ದೇಶಗಳಲ್ಲಿ ಬೇರೆ ಬೇರೆ ರೀತಿಯ ಕ್ಯಾನ್ಸರ್‌ಗಳಿಗೆ ಅನುಮೋದನೆ ಪಡೆದಿರುವ ಈ ಔಷಧಿ, ಭಾರತದಲ್ಲಿ ಕೂಡ ಶ್ವಾಸಕೋಶ ಕ್ಯಾನ್ಸರ್, ತಲೆ-ಕುತ್ತಿಗೆ ಕ್ಯಾನ್ಸರ್, ಗರ್ಭಾಶಯ ಕ್ಯಾನ್ಸರ್, ಮೂತ್ರಪಿಂಡ ಕ್ಯಾನ್ಸರ್ ಮತ್ತು ಮೆಲನೋಮಾ ಸೇರಿದಂತೆ 10 ವಿಧವಾದ ಕ್ಯಾನ್ಸರ್‌ಗಳಿಗೆ ಬಳಸುತ್ತಿದ್ದಾರೆ. ಅಷ್ಟಾಗಿಯೂ, ಇದರ ಪರಿಣಾಮಕಾರಿ ಜಾಗತಿಕ ಮಟ್ಟದಲ್ಲಿ ಸಾಬೀತು ಆಗಿದ್ದರೂ, ಭಾರತದಲ್ಲಿ ಇದನ್ನು ಪಡೆದುಕೊಂಡು ಗುಣಮುಖರಾಗುವುದು ಬಹುತೇಕ ರೋಗಿಗಳಿಗೆ ಇನ್ನೂ ಕನಸಾಗಿದೆ.
ಈ ಔಷಧಿಯನ್ನು ಎರಡು ವರ್ಷಗಳ ಹಿಂದೆ, ಗುರುಗ್ರಾಮದ ನಿವಾಸಿಯಾದ ಏಕ್ತಾ ತನ್ನ ಮನೆಯಲ್ಲಿ ಡೈನಿಂಗ್ ಟೇಬಲ್ ಬಳಿ ಕುಳಿತು ಸಂಜೆ 6:45ಕ್ಕೆ ಕಿರಣ್ ಪೇಷಂಟ್ ಆಕ್ಸೆಸ್ ಪ್ರೋಗ್ರಾಂ ಪ್ರತಿನಿಧಿಯ ಜೊತೆಗೆ ಮಾತನಾಡುತ್ತಿದ್ದಳು. ಈಕೆ ಒಂದು ಗಂಟೆಗೂ ಹೆಚ್ಚು ಕಾಲ ಮಾತನಾಡಿದಳು, ಯಾಕಂದ್ರೆ ಕರೆ ಕಡಿತ ಆಗಿದ್ರೆ ತನ್ನ ಅತ್ತೆಗೆ ಮುಂಬರುವ ದಿನ ದೆಹಲಿಯ AIIMS ನಲ್ಲಿ Keytruda ಡೋಸ್ ಸಿಗುವುದಿಲ್ಲ ಎಂಬ ಭಯ ಕಾಡುತ್ತಾ ಇತ್ತು. OTP ಸಿಗದೆ ಇದ್ದರೆ ಔಷಧಿ ಪಡೆಯಲು ಸಾಧ್ಯ ಆಗುತ್ತಿರಲಿಲ್ಲ. ಈ ಘಟನೆಯು ನಮ್ಮ ಭಾರತದಲ್ಲಿ ಕ್ಯಾನ್ಸರ್ ರೋಗಿಗಳು ಎಷ್ಟು ಕಷ್ಟವನ್ನು ಎದುರಿಸುತ್ತಿದ್ದಾರೆ ಎನ್ನುವುದನ್ನು ತೋರಿಸಿಕೊಡುತ್ತದೆ.
63 ವರ್ಷದ ಅಜಿತ್ ಎಂಬ ವ್ಯಕ್ತಿ 2017ರಲ್ಲಿ ಮೂತ್ರಪಿಂಡ ಕ್ಯಾನ್ಸರ್‌ನಿಂದ ಬಳಲುತ್ತಾನೆ. ಅವರಿಗೆ Keytruda ಪಡೆಯುವ ಅವಕಾಶ ಸಿಕ್ಕಿತು , ಯಾಕೆಂದರೆ ಅವರು ವಿಶೇಷ ಕ್ಯಾನ್ಸರ್ ಇನ್ಶೂರೆನ್ಸ್ ಪಾಲಿಸಿಯನ್ನು ತೆಗೆದುಕೊಂಡಿದ್ದರಿಂದ ಮಾತ್ರ. ಆಪರೇಷನ್ ನಂತರ ಹೇರ್ನಿಯಾ ಸಮಸ್ಯೆ ಎದುರಾಯಿತು, ವೈದ್ಯರು ಅವರು ಬದುಕಿ ಉಳಿಯುವುದು ಕಷ್ಟ ಎನ್ನುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಪ್ರಸ್ತುತ ಈಗ ಅವರು ಒಂದು ವರ್ಷಕ್ಕಿಂತ ಜಾಸ್ತಿ ಕಾಲ Keytruda ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಏಕ್ತಾ ಹಾಗೂ ಅಜಿತ್ ಅವರ ಕಥೆಗಳು ಒಂದೇ ವಿಷಯವನ್ನು ಸ್ಪಷ್ಟಪಡಿಸುತ್ತವೆ — ಈ ಔಷಧಿ ಪಡೆದುಕೊಳ್ಳುವುದು ಜನ ಸಾಮಾನ್ಯ ವ್ಯಕ್ತಿಗೆ ಬಹಳ ಕಷ್ಟ.
The Indian Express ಹಾಗೂ International Consortium of Investigative Journalists ತನಿಖೆ ನಡೆಸಿದ ಪ್ರಕಾರ, ಭಾರತದಲ್ಲಿ Keytruda ಪಡೆಯಲಿಕ್ಕೆ ಹಣಕಾಸು, ವ್ಯವಸ್ಥಾಪಕ ಹಾಗೂ ನಿಯಂತ್ರಣಕ್ಕೆ ಸಂಬಂಧ ಪಟ್ಟ ಹಾಗೆ ಅನೇಕ ಅಡೆತಡೆಗಳು ಇವೆ. ಔಷಧಿಯ ಬೆಲೆ ಹೆಚ್ಚಾಗಿದೆ ಮತ್ತು ಪ್ರಕ್ರಿಯೆಯ ಕಠಿಣತೆ ಇದನ್ನು ಬಹುತೇಕ ರೋಗಿಗಳಿಗೆ ಅಸಾಧ್ಯ ಅನ್ನುವ ಹಾಗೆ ಮಾಡಿದೆ.
Merck & Co ಕಂಪನಿಯ Keytruda ಅನ್ನು ತಯಾರ್ಇಇಡುತ್ತದೆ. ಇದರ ಪಾಲು ಬಹಳ ದೊಡ್ಡದು. ಪ್ರಸ್ತುತ ಸುಮಾರು 29.5 ಬಿಲಿಯನ್ ಡಾಲರ್ ಮಾರಾಟವಾಗಿದೆ. ಆದರೆ ಭಾರತದಲ್ಲಿ, ಇದರ ಬೆಲೆ ಮತ್ತು ಲಭ್ಯತೆಯ ಕೊರತೆಯಿಂದಾಗಿ ರೋಗಿಗಳಿಗೆ ಇದು ಸಿಗುವುದೇ ಇಲ್ಲ.
Keytruda ವನ್ನು ಪಡೆಯಲು ಇರುವ ಪ್ರಕ್ರಿಯೆ ಬಹಳ ಕಷ್ಟಕರವಾಗಿದೆ. ಒಂದು ವೇಳೆ ಕಿರಣ್ ಪೇಷಂಟ್ ಆಕ್ಸೆಸ್ ಪ್ರೋಗ್ರಾಂ ಇರಲಿಲ್ಲ ಅಂದರೆ , ಒಂದು 200 ಮಿಗ್ರಾಂ ಡೋಸ್‌ಗೆ ಸುಮಾರು 3 ಲಕ್ಷ ರೂಪಾಯಿಗೂ ಹೆಚ್ಚು ಪಾವತಿ ಮಾಡಬೇಕಾಗುತ್ತದೆ. ಈ ಯೋಜನೆಯ ಪ್ರಕಾರ ಮೊದಲ ಐದು ಡೋಸ್‌ಗಳಿಗೆ ಒಂದು 100 ಮಿಗ್ರಾಂ ವೈಯಲ್ ಅನ್ನು ಖರೀದಿಸಿದರೆ ಇನ್ನೊಂದು ವೈಯಲ್ ಉಚಿತವಾಗಿ ನೀಡುತ್ತಾರೆ. ಆದರೆ ಇದಕ್ಕೆ ಅರ್ಹರಾಗಬೇಕಾದರೆ ಮೊದಲು ಕನಿಷ್ಠ ಐದು ವೈಯಲ್‌ಗಳನ್ನು ಆದರೂ ನೀವು ಖರೀದಿಸಬೇಕು, ಇದಕ್ಕೆ ಸುಮಾರು 10 ಲಕ್ಷ ರೂಪಾಯಿಗಿಂತ ಹೆಚ್ಚು ಖರ್ಚು ಆಗುತ್ತದೆ. ಬಳಿಕ ಉಚಿತ ಡೋಸ್‌ಗಳನ್ನು ಪಡೆದುಕೊಳ್ಳಬಹುದು. ಮತ್ತಷ್ಟು ಬೇಕಾದರೆ ಪುನಃ ಹೊಸದಾಗಿ ನೋಂದಣಿ ಮಾಡಿ ಮತ್ತೆ ಹಣವನ್ನು ಪಾವತಿಸಬೇಕಾಗುತ್ತದೆ.
ಏಕ್ತಾ ಕುಟುಂಬದವರು ಈ ಹಣವನ್ನು ಪಾವತಿಸಲು ಕಾರ್ಪೊರೇಟ್ ಇನ್ಶೂರೆನ್ಸ್ ಮತ್ತು ತಮ್ಮ ಖರ್ಚುಗಳಿಗೆ ಸಂಗ್ರಹಿಸಿಟ್ಟ ಹಣವನ್ನು ಸೇರಿಸಿಕೊಂಡು ವ್ಯವಸ್ಥೆ ಮಾಡಬೇಕಾಯಿತು. ಅಜಿತ್ ಅವರಲ್ಲಿ ಇದ್ದಂತಹ ಇನ್ಶೂರೆನ್ಸ್ ಪಾಲಿಸಿಯೇ ಈ ಮೊತ್ತವನ್ನು ಭರಿಸಿ ಕೊಟ್ಟಿತು. ಆದರೆ ಹೆಚ್ಚಿನ ಭಾರತೀಯರಿಗೆ ಇಂತಹ ಅವಕಾಶವೇ ಇಲ್ಲ.
ಈ ಯೋಜನೆಗೆ ಸೇರಿಕೊಂಡ ನಂತರ ಪ್ರಕ್ರಿಯೆ ಸುಲಭವಾಗಿ ಇರುವುದಿಲ್ಲ. ಪ್ರತಿಯೊಂದು ಡೋಸ್ ತೆಗೆದುಕೊಳ್ಳಲು ವೈದ್ಯರ ಸಹಿ ಮತ್ತು ಮುದ್ರೆ ಹೊಂದಿರುವ ದಾಖಲೆಗಳನ್ನು ಇಮೇಲ್ ಮೂಲಕ ಕಳುಹಿಸಿ ಕೊಡಬೇಕು. ಏನಾದರು ತಪ್ಪಿದ್ದರೂ, ಪುನಃ ಆಸ್ಪತ್ರೆಗೆ ಹೋಗಿ ಸರಿಪಡಿಸಬೇಕು. ಔಷಧಿ ನೀಡುವ ಪ್ರತಿನಿಧಿ ಸ್ಥಳದಲ್ಲೇ ಎಲ್ಲಾ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಾನೆ. ಈ ಹಂತದಲ್ಲಿ ಯಾವುದೇ ಬದಲಾವಣೆ ಇದ್ದರೆ, ಡೋಸ್ ಸಿಗುವುದು ಇನ್ನೂ ವಿಳಂಬ ಆಗಬಹುದು.
ಪ್ರತಿ ಡೋಸ್ ನೀಡುವಾಗ ಒಬ್ಬ ನೋಂದಾಯಿತ ಕೇರ್‌ಗಿವರ್ ಅಲ್ಲಿಗೆ ಹಾಜರಾಗಬೇಕು, ಇದರಿಂದ ಕುಟುಂಬದ ಸದಸ್ಯರು ಕೆಲಸದಿಂದ ರಜೆ ತೆಗೆದುಕೊಳ್ಳಬೇಕಾಗುತ್ತದೆ. ಮೂರು ವಾರಕ್ಕೊಮ್ಮೆ ಡೋಸ್ ಬೇಕಾಗುತ್ತದೆ, ಒಮ್ಮೆ ಸಮಯ ತಪ್ಪಿತು ಎಂದಾದರೆ ಮತ್ತೆ ಅಪಾಯಿಂಟ್ಮೆಂಟ್ ಪಡೆಯುವುದು ತುಂಬಾ ಕಷ್ಟ ಆಗುತ್ತದೆ.
ಈ ಸಮಸ್ಯೆಗಳು ಮಾತ್ರವಲ್ಲದೆ ಜೊತೆಗೆ ಇನ್ನೂ ನಾಲ್ಕು ಮುಖ್ಯ ಅಡೆತಡೆಗಳು ಇವೆ. ಮೊದಲನೆಯದಾಗಿ, ಈ ಯೋಜನೆಯ ಬಗ್ಗೆ ಮಾಹಿತಿ ಬಹಳ ಕಡಿಮೆ ಇದೆ. ವೈದ್ಯರು ಮಾತ್ರ ಇದರ ಬಗ್ಗೆ ಹೇಳುತ್ತಾರೆ ಹೊರತು ಕೆಲವು ವಂಚಕರು ಕಡಿಮೆ ಬೆಲೆಗೆ ಔಷಧಿ ಕೊಡುತ್ತೇವೆ ಎಂದು ಹೇಳಿ ನಕಲಿ ಔಷಧಿಗಳನ್ನು ಮಾರಾಟ ಮಾಡಿ ಅಮಾಯಕರಿಗೆ ವಂಚಿಸುತ್ತಾರೆ.
ಎರಡನೆಯದಾಗಿ, ಪ್ರಾರಂಭಿಕ ಮೊತ್ತ 10 ಲಕ್ಷ ರೂಪಾಯಿ ಈ ಮಟ್ಟದ ವೆಚ್ಚವನ್ನು ಬಹುತೇಕ ಜನರಿಗೆ ಭರಿಸಲು ಸಾಧ್ಯವಿಲ್ಲ. ವರ್ಷಕ್ಕೆ ಯಾರಿಗೆ 25 ಲಕ್ಷಕ್ಕಿಂತ ಹೆಚ್ಚು ಆದಾಯ ಬರುತ್ತಿದೆಯೋ ಅಥವಾ ಹೆಚ್ಚಿನ ಇನ್ಶೂರೆನ್ಸ್ ಸಿಗುತ್ತದೆಯೋ ಅವರು ಈ ಯೋಜನೆಗೆ ಅರ್ಹರಾಗುವುದಿಲ್ಲ. ಇದರಿಂದಾಗಿ ಮಧ್ಯಮ ವರ್ಗದ ಜನರಿಗೂ ಈ ಔಷಧಿ ದೊರೆಯುವುದು ಅಸಾಧ್ಯ.
ಮೂರನೆಯದಾಗಿ, ಯಾರು ಅರ್ಹರು ಅವರಿಗೆ ಪ್ರಾಯೋಗಿಕವಾಗಿ ಈ ಯೋಜನೆ ಪ್ರಯೋಜನ ಆಗುವುದಿಲ್ಲ. ಒಂದು ಅಧ್ಯಯನ ಪ್ರಕಾರ, ಈ ಔಷಧಿ ಬೇಕಿರುವವರಲ್ಲಿ 2% ಕ್ಕಿಂತ ಕಡಿಮೆ ಜನರು ಮಾತ್ರ ಇದನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದಾರೆ.
ನಾಲ್ಕನೆಯದಾಗಿ, ಈ ಔಷಧಿಯನ್ನು ವೈದ್ಯಕೀಯ ಆಂಕಾಲಜಿಸ್ಟ್ ಅಥವಾ ಹೀಮಾಟಾಲಜಿಸ್ಟ್ ಮಾತ್ರ ನಿಮಗೆ ಅಡ್ವೈಸ್ ಮಾಡಬಹುದು. ಗ್ರಾಮೀಣ ಪ್ರದೇಶಗಳಲ್ಲಿ ಉನ್ನತ ತಜ್ಞರು ಕಡಿಮೆ ಇರುವುದರಿಂದ, ರೋಗಿಗಳಿಗೆ ಈ ಔಷಧಿ ಸಿಗುವುದೇ ಕಷ್ಟಕರವಾಗಿದೆ.
ಒಟ್ಟಾರೆಯಾಗಿ ನೋಡಿದರೆ, Keytruda ಎಂಬ ಔಷಧಿ ಕ್ಯಾನ್ಸರ್ ವಿರುದ್ಧ ಹೋರಾಡುವ ಒಂದು ಅತ್ಯುನ್ನತ ಸಾಧನವಾಗಿದ್ದರೂ, ಭಾರತದಲ್ಲಿ ಇದರ ದೊರೆಯುವಿಕೆ ಇನ್ನೂ ದೊಡ್ಡ ಪ್ರಶ್ನೆಯಾಗಿದೆ. ಹೆಚ್ಚು ವೆಚ್ಚ, ಕಠಿಣ ಪ್ರಕ್ರಿಯೆ, ಮಾಹಿತಿಗಳ ಕೊರತೆ ಮತ್ತು ವೈದ್ಯಕೀಯ ವ್ಯವಸ್ಥೆ ಸಮತೋಲನ ಕಳೆದುಕೊಂಡಿರುವುದು — ಈ ಎಲ್ಲಾ ಕಾರಣಗಳಿಂದಾಗಿ ಹೆಚ್ಚಿನ ರೋಗಿಗಳು ಉತ್ತಮ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ಬಳಲುತ್ತಿದ್ದಾರೆ.
ಇದೇ ಸಮಸ್ಯೆಯನ್ನು ಇನ್ನಷ್ಟು ಗಮನ ಕೊಟ್ಟು ಆಳವಾಗಿ ಪರಿಶೀಲನೆ ನಡೆಸಿ ನೋಡಿದಾಗ, ಭಾರತದಲ್ಲಿ ಆರೋಗ್ಯ ವ್ಯವಸ್ಥೆಯ ಅಸಮಾನತೆ ಸ್ಪಷ್ಟವಾಗಿ ಕಾಣಿಸುತ್ತದೆ. ದೊಡ್ಡ ನಗರಗಳಲ್ಲಿ ಉತ್ತಮ ಆಸ್ಪತ್ರೆಗಳು, ನುರಿತ ವೈದ್ಯರು ಮತ್ತು ಅತ್ಯಾಧುನಿಕ ಚಿಕಿತ್ಸೆಗಳು ಲಭ್ಯವಾಗುತ್ತದೆ, ಗ್ರಾಮೀಣ ಮತ್ತು ಸಣ್ಣ ಪಟ್ಟಣಗಳಲ್ಲಿ ಈ ಸೌಲಭ್ಯಗಳು ಸಿಗುವುದು ಕಷ್ಟಕರ. Keytruda ಔಷಧಿಗಳನ್ನು ಬಳಸಲು ನುರಿತ ತಜ್ಞ ವೈದ್ಯರು — ವಿಶೇಷವಾಗಿ ಮೆಡಿಕಲ್ ಆಂಕಾಲಜಿಸ್ಟ್‌ಗಳು — ದೇಶದಲ್ಲಿ ಅತಿ ಕಡಿಮೆ ಜನ ಇದ್ದಾರೆ. ಇದರಿಂದಾಗಿ, ಅನೇಕ ರೋಗಿಗಳು ಮೊದಲೇ ಚಿಕಿತ್ಸೆ ಪಡೆಯುವ ಅವಕಾಶವನ್ನೇ ಕಳೆದುಕೊಂಡುಬಿಡುತ್ತಾರೆ.
ಭಾರತದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಹೋಗುತ್ತಿರುವುದು ಮೊದಲಿನ ಮಾತು ಈಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಮ್ಮ ಜೀವನಶೈಲಿ ಬದಲಾಗಿದೆ, ಪರಿಸರ ಬದಲಾಗಿದೆ, ವಾತಾವರಣ ಬದಲಾಗಿದೆ, ಖಾಯಿಲೆಗಳು ಮೊದಲೇ ಪತ್ತೆಹಚ್ಚಲು ಆಗದೆ ಕೊನೆಯ ಹಂತಕ್ಕೆ ತಲುಪಿದಾಗ ತಿಳಿಯುವಷ್ಟರಲ್ಲಿ ಸಮಯ ಕಳೆದುಹೋಗುತ್ತದೆ.ಇವು ಪ್ರಮುಖ ಕಾರಣಗಳು ಆಗಿವೆ. ಈ ಪರಿಸ್ಥಿತಿಯಲ್ಲಿ, Keytruda ಆಧುನಿಕ ಇಮ್ಯುನೋಥೆರಪಿ ಔಷಧಿಗಳು ರೋಗಿಗಳ ಬದುಕನ್ನು ಉಳಿಸುವಲ್ಲಿ ಉತ್ತಮ ಕಾರ್ಯವನ್ನು ಮಾಡಬಹುದು. ಆದರೆ ಇದರ ಬೆಲೆ ಮತ್ತು ದೊರೆಯುವಿಕೆ ನಡುವಿನ ಅಂತರ ತುಂಬಾನೆ ದೊಡ್ಡದು. ಸಾಮಾನ್ಯ ಕುಟುಂಬಕ್ಕೆ 10 ಲಕ್ಷ ರೂಪಾಯಿ ಒಟ್ಟಿಗೆ ಖರ್ಚು ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ, ಕೆಲವರು ತಮ್ಮ ಆಸ್ತಿ ಮಾರಾಟ ಮಾಡುವುದು, ಸಾಲ ಮಾಡುವುದು ಅಥವಾ ಚಿಕಿತ್ಸೆ ತೆಗೆದುಕೊಳ್ಳದೆ ಇರುವುದು ಮಾಡುತ್ತಾರೆ.
ಇನ್ನು ಇನ್ಶೂರೆನ್ಸ್ ವ್ಯವಸ್ಥೆಯ ವಿಷಯದ ಬಗ್ಗೆ ಹೇಳಬೇಕೆಂದರೆ , ಭಾರತದಲ್ಲಿ ಆರೋಗ್ಯ ವಿಮೆ ಇನ್ನೂ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿಲ್ಲ. ಹಲವಾರು ಪಾಲಿಸಿಗಳು ಕೇವಲ ಸಣ್ಣ ಚಿಕಿತ್ಸೆಗಳನ್ನೇ ಕವರ್ ಮಾಡುತ್ತವೆ. ಇಮ್ಯುನೋಥೆರಪಿ ಅಥವಾ ಅತ್ಯಾಧುನಿಕ ಔಷಧಿಗಳನ್ನು ಒಳಗೊಂಡಿರುವ ಪಾಲಿಸಿಗಳು ತುಂಬಾ ಕಡಿಮೆ. ಸರ್ಕಾರದ Ayushman Bharat ಯೋಜನೆಯು ಬಡವರಿಗೆ ಸಹಾಯ ಮಾಡುತ್ತಿರುವ ಬಗ್ಗೆ ಎಲ್ಲರಿಗೂ ತಿಳಿದಿದೆ, ಆದರೆ ಅದರ ಮಿತಿಯು 5 ರಿಂದ 10 ಲಕ್ಷ ರೂಪಾಯಿಗಳವರೆಗೆ ಮಾತ್ರ ಇರುತ್ತದೆ. Keytruda ಚಿಕಿತ್ಸೆಗಾಗಿ ಇದು ಎಲ್ಲಿಯೂ ಸಾಕಾಗುವುದಿಲ್ಲ, ಏಕೆಂದರೆ ಒಂದು ಹಂತದ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಬೇಕಾಗುತ್ತದೆ.
ಇದಲ್ಲದೆ, ರೋಗಿಗಳು ಮಾನಸಿಕ ಒತ್ತಡವನ್ನು ಎದುರಿಸುತ್ತಾರೆ.ಕ್ಯಾನ್ಸರ್ ಎನ್ನುವ ಕಾಯಿಲೆ ಇದೆ ಎನ್ನುವುದೇ ಒಂದು ದೊಡ್ಡ ಭಯವಾಗಿ ಕಾಡುತ್ತದೆ.ಇದರ ಜೊತೆಗೆ ಹಣಕಾಸಿನ ಸಮಸ್ಯೆಗಳು ಕಾಡುತ್ತವೆ, ಪದೇ ಪದೇ ಆಸ್ಪತ್ರೆಗೆ ಭೇಟಿ ಕೊಡಬೇಕಾಗುತ್ತದೆ.ಇದು ಕುಟುಂಬದ ಮೇಲೆ ಭಾರೀ ಒತ್ತಡವನ್ನು ಹಾಕುತ್ತದೆ.
ಇನ್ನೊಂದು ಮುಖ್ಯ ಸಮಸ್ಯೆ ಏನು ಅಂದ್ರೆ, ನಿಯಂತ್ರಣ ಮತ್ತು ಅನುಮೋದನೆ ಪ್ರಕ್ರಿಯೆಯ ನಿಧಾನಗತಿ. ಅಮೆರಿಕದ US FDA ಒಂದು ಔಷಧಿಗೆ ಅನುಮೋದನೆಯನ್ನು ನೀಡಿದ ನಂತರ, ಭಾರತದಲ್ಲಿ Central Drugs Standard Control Organisation ಅನುಮೋದನೆ ಪಡೆಯಲು ತಿಂಗಳುಗಟ್ಟಲೆ ಕಾಲ ಅಥವಾ ವರ್ಷಗಳ ಕಾಲ ಕಾಯಬೇಕಾಗುತ್ತದೆ. ಈ ವಿಳಂಬದಿಂದಾಗಿ, ಅನೇಕ ರೋಗಿಗಳು ಹೊಸ ಚಿಕಿತ್ಸೆ ಸಿಗದೇ ವಂಚಿತರಾಗುತ್ತಾರೆ. ಸಮಯವೇ ಇಲ್ಲಿ ಪ್ರಮುಖ ಅಂಶವಾಗಿರುವುದರಿಂದ, ಈ ರೀತಿಯ ವಿಳಂಬದಿಂದಾಗಿ ಜೀವ ಹಾನಿ ಆಗಬಹುದು.
ಮತ್ತೊಂದೆಡೆ, ಕಪ್ಪುಬಜಾರ್ ಸಮಸ್ಯೆಯೂ ಉಂಟಾಗುತ್ತದೆ.ಕಷ್ಟದ ಸಮಯದಲ್ಲಿ ಜೀವ ಉಳಿಸಲು ಹಣವಿಲ್ಲದೆ ಚಿಕಿತ್ಸೆ ವೆಚ್ಚ ಬಾರಿಸಲಾಗದೆ ಬಳಲುತ್ತಿರುವ ಸಂದರ್ಭದಲ್ಲಿ ಯಾರಾದರೂ ಬಂದು ಅವರ ಕಠಿಣ ಪರಿಸ್ಥಿತಿಯನ್ನು ಉಪಯೋಗಿಸಿಕೊಂಡು ನಿಮಗೆ ಅತಿ ಕಡಿಮೆ ಬೆಲೆಗೆ ಔಷಧಿಯನ್ನು ಕೊಡುವುದಾಗಿ ಹೇಳುತ್ತಾರೆ. ಹಾಗೂ ಅವರು ನಿಮ್ಮಿಂದ ಹಣವನ್ನು ತೆಗೆದುಕೊಂಡು ಅಕ್ರಮ ಗುಂಪುಗಳಿಂದ ನಕಲಿ ಔಷಧಿಗಳನ್ನು ನಿಮಗೆ ಕೊಡುತ್ತಾರೆ. ಇದರಿಂದ ರೋಗಿಗಳ ಆರೋಗ್ಯಕ್ಕೆ ಅಪಾಯ ಆಗುವುದಲ್ಲದೆ ಅವರಿಗೆ ಇರುವ ನಂಬಿಕೆಯನ್ನೂ ಕುಂದಿಸುತ್ತದೆ. ಈ ರೀತಿಯ ವಂಚನೆಗಳನ್ನು ತಡೆಯಲು ಕಟ್ಟುನಿಟ್ಟಿನ ನಿಯಂತ್ರಣ ಮತ್ತು ಜಾಗೃತಿ ಅಗತ್ಯವಾಗಿದೆ.
- Best exercises for lower back pain relief at home: ಈ ವ್ಯಾಯಾಮಗಳನ್ನು ಮಾಡಿದರೆ ನಿಮ್ಮ ಸೊಂಟನೋವು ಖಂಡಿತ ಮಾಯ ಆಗುತ್ತದೆ,ಪೂರ್ತಿ ಮಾಹಿತಿ ಇಲ್ಲಿದೆ. - April 16, 2026
- Cancer Drug Crisis: ಬಹು ದುಬಾರಿ Keytruda ಔಷಧಿ, ಸಾಮಾನ್ಯ ಜನರಿಗೆ ಯಾಕೆ ಸಿಗುತ್ತಿಲ್ಲ? ದುಬಾರಿ ಕ್ಯಾನ್ಸರ್ ಔಷಧಿಗೆ ಭಾರತೀಯರ ಹೋರಾಟ - April 14, 2026
- High salary illusion:ಬರೋಬ್ಬರಿ 40 ಲಕ್ಷ ಸಂಬಳವನ್ನುಪಡೆಯುತ್ತಿದ್ದ ಯುವಕ ಈಗ rapido ಚಾಲಕ, ಈತನ ಕಥೆ ಕೇಳಿದ್ರೆ ಎಂಥವರಿಗೂ ಅಯ್ಯೋ ಅನಿಸಬಹುದು ಅಥವಾ ಪ್ರೇರಣೆ ಆಗಬಹುದು ಪೂರ್ತಿ ಮಾಹಿತಿ ತಿಳಿದುಕೊಳ್ಳಿ - April 13, 2026